Basavanna Vachanagalu In Kannada: ಬಸವಣ್ಣ 12 ನೇ ಶತಮಾನದ ತತ್ವಜ್ಞಾನಿ, ಸಾಮಾಜಿಕ ಸುಧಾರಕ ಮತ್ತು ಬೋಧಕನಾಗಿದ್ದು, ಅವರ ಬೋಧನೆಗಳನ್ನು ಕರ್ನಾಟಕದಿಂದ ಮಾತ್ರವಲ್ಲದೆ ಇಡೀ ದೇಶದಿಂದಲೂ ಪಾಲಿಸಲಾಗುತ್ತದೆ.
ಸಾಮಾಜಿಕ ಸುಧಾರಕನಾಗಿ, ಬಸವಣ್ಣ ಅವರು ಸಾಂಪ್ರದಾಯಿಕವಾದಿಗಳ ಕೈಯಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗಿತ್ತು. ಆದರೆ ಅವರ ಕಾಲದ ಇತರ ಸುಧಾರಕರೊಂದಿಗೆ, ಅವರು ವೇದಗಳ ಬೋಧನೆಗಳು ಮತ್ತು ಸಂಪ್ರದಾಯಗಳನ್ನು ಮತ್ತು ಪ್ರಾಚೀನ ಗ್ರಂಥಗಳನ್ನು ಪ್ರಶ್ನಿಸಿ ಭಾರತದ ಇತಿಹಾಸದಲ್ಲಿ ಒಂದು ಶ್ರೇಷ್ಠ ಧಾರ್ಮಿಕ ಚಳವಳಿಯನ್ನು ಪ್ರಾರಂಭಿಸಿದರು.
ಈ ಲೇಖನದಲ್ಲಿ ನಾವು ನಿಮಗೆ ಶ್ರೀ ಬಸವಣ್ಣನವರ ವಚನಗಳನ್ನು ಒದಗಿಸಿದ್ದೇವೆ.
Basavanna Vachanagalu In Kannada – ಬಸವಣ್ಣನವರ ವಚನಗಳು
1.
ಜ್ಞಾನಾಮೃತವೆಂಬ ಜಲಧಿಯ ಮೇಲೆ
ಸಂಸಾರವೆಂಬ ಹಾವಸೆ ಮುಸುಕಿಹುದು.
ನೀರ ಮೊಗೆವವರು ಬಂದು ನೂಕಿದಲ್ಲದೆ ತೆರಳದು.
ಮರಳಿ ಮರಳಿ ಮುಸುಕುವುದು ಮಾಣದಯ್ಯ.
ಆಗಳೂ ಎನ್ನುವನು ನೆನೆವುತ್ತಿರಬೇಕೆಂದು-
ಬೇಗ ಗುರು ಅಪ್ಪೈಸಿ ತನ್ನ ಪ್ರಸಾದವೆಂದು ಕುರುಹ ಕೊಟ್ಟನು.
ದಿವಾರಾತ್ರಿ ಮಾಡ ಹೇಳಿದ ಲಿಂಗಪೂಜೆಯ, ತನ್ನನರಿಯಬೇಕೆಂದು.
ಕೆರೆಯ ನೀರನುಂಡು ತೊರೆಯ ನೀರ ಹೊಗಳುವ ಅರೆಮರುಳುಗಳ ಮೆಚ್ಚ ನಮ್ಮ ಕೂಡಲಸಂಗಮದೇವ.
2.
ಮಡಕೆಯ ಮಾಡುವಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೇ ಮೊದಲು,
ಶಿವಪಥವನರಿವಡೆ ಗುರುಪಾದವೇ ಮೊದಲು
ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು.
3.
ಅಯ್ಯಾ, ನೀನು ನಿರಾಕಾರವಾದಲ್ಲಿ
ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನು ನಾಂಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನು ಸಾಕಾರವಾಗಿದ್ದಲ್ಲಿ
ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು
ಜಂಗಮಲಾಂಛನವಾಗಿ ಬಂದಲ್ಲಿ
ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ ಕೂಡಲಸಂಗಮದೇವ.
4.
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ,
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು.
ಇನ್ನೆಂದಿಂಗೆ ಮೋಕ್ಷವಹುದೋ. ಕೂಡಲಸಂಗಮದೇವ.
5.
ಸಂಸಾರವೆಂಬ ಸರ್ಪ ಮುಟ್ಟಲು
ಪಂಚೇಂದ್ರಿಯವಿಷಯವೆಂಬ
ವಿಷದಿಂದಾನು ಮುಂದುಗೆಟ್ಟೆನಯ್ಯ,
ಆನು ಹೊರಳಿ ಬೀಳುತ್ತಿದ್ದೆನಯ್ಯ;
‘ಓಂ ನಮಶ್ಶಿವಾಯ’ ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯ
ಕೂಡಲಸಂಗಮದೇವ.
6.
ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ,
ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ ಅಳಲಿಸಿ ಬಳಲಿಸುತ್ತಿದೆ ನೋಡಾ.
ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ
ಅಪರಿಮಿತ ಸುಖವನೆಯ್ದದು ನೋಡಾ.
7.
ತುಪ್ಪದ ಸವಿಗೆ ಅಲಗ ನೆಕ್ಕುವ
ಸೊಣಗನಂತೆನ್ನ ಬಾಳುವೆ
ಸಂಸಾರಸಂಗವ ಬಿಡದು ನೋಡೆನ್ನ ಮನವು.
ಈ ನಾಯಿತನವ ಮಾಣಿಸು
ಕೂಡಲಸಂಗಮದೇವಯ್ಯ ನಿಮ್ಮ ಧರ್ಮ.
8.
ವಚನದ ಹುಸಿ-ನುಸುಳೆಂತು ಮಾಬುದೆನ್ನ.
ಮನದ ಮರ್ಕಟತನವೆಂತು ಮಾಬುದೆನ್ನ.
ಹೃದಯದ ಕಲ್ಮಷವೆಂತು ಮಾಬುದೆನ್ನ.
ಕಾಯವಿಕಾರಕ್ಕೆ ತರಿಸಲುವೋದೆನು.
ಎನಗಿದು ವಿಧಿಯೇ, ಕೂಡಲಸಂಗಮದೇವ.
9.
ವಿಕಳನಾದೆನು ಪಂಚೇಂದ್ರಿಯಧಾತುವಿಂದ.
ಮತಿಗೆಟ್ಟನು ಮನದ ವಿಕಾರದಿಂದ.
ಧೃತಿಗೆಟ್ಟೆನು ಕಾಯವಿಕಾರದಿಂದ.
ಶರಣುವೊಕ್ಕೆನು ಕೂಡಲಸಂಗಮದೇವಯ್ಯ
ಎನ್ನುವನು ಕಾಯಯ್ಯ.
10.
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ,
ತಿಳಿಯಲೀಯದು; ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗತಂದೆ.
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ.
11.
ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ ಎನ್ನ ವಶವೇ ಅಯ್ಯ.
ನೀನಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯ.
ಅಕಟಕಟಾ ಎನ್ನವನೆನ್ನವನೆನ್ನಯ್ಯ ಕೂಡಲಸಂಗಮದೇವಯ್ಯ.
12.
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ.
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ.
ತನುವಿನಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ.
ಕೂಡಲಸಂಗಮದೇವ.
13.
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು.
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು.
ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು.
ಕೊಂದವರುಳಿದರೆ ಕೂಡಲಸಂಗಮದೇವ
14.
ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿಮಸಣಿಯ ಭಕ್ತೆ;
ಗಂಡ ಕೊಂಬುದು ಪಾದೋದಕಪ್ರಸಾದ,
ಹೆಂಡತಿ ಕೊಂಬುದು ಸುರೆಮಾಂಸ.
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವ.
15.
ಹಾವಿನ ಬಾಯಿ ಕಪ್ಪೆ ಹಸಿದು
ತಾ ಹಾರುವ ನೊಣಕಾಸೆ ಮಾಡುವಂತೆ,
ಶೂಲವನೇರುವ ಕಳ್ಳ ಹಾಲು ತುಪ್ಪವ ಕುಡಿದು
ಮೇಲಿನ್ನೇಸು ಕಾಲ ಬದುಕುವನೋ.
ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು
ಒಡಲ ಹೊರೆವವರ ಮೆಚ್ಚ ನಮ್ಮ ಕೂಡಲಸಂಗಮದೇವ.
16.
ಭಕ್ತರ ಕಂಡರೆ ಬೋಳಪ್ಪಿರಯ್ಯ;
ಸವಣರ ಕಂಡರೆ ಬತ್ತಲೆಯಪ್ಪಿರಯ್ಯ
ಹಾರುವರ ಕಂಡರೆ ಹರಿನಾಮವೆಂಬಿರಯ್ಯ;
ಅವರವರ ಕಂಡರೆ ಅವರವರಂತೆ
ಸೂಳೆಗೆ ಹುಟ್ಟಿದವರ ತೋರದಿರಯ್ಯ.
ಕೂಡಲಸಂಗಯ್ಯನ ಪೂಜಿಸಿ ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯ.
17.
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
ಸಲಹುತ್ತ, ‘ಶಿವಶಿವಾ’ ಎಂದೋದಿಸಯ್ಯ.
ಭಕ್ತಿ ಎಂಬ ಪಂಜರದೊಳಗಿಕ್ಕಿ ಸಲಹು ಕೂಡಲಸಂಗಮದೇವ.
18.
ಕರಿಯಂಜುವುದು ಅಂಕುಶಕ್ಕಯ್ಯ.
ಗಿರಿಯಂಜುವುದು ಕುಲಿಶಕ್ಕಯ್ಯ.
ತಮಂಧವಂಜುವುದು ಜ್ಯೋತಿಗಯ್ಯ.
ಕಾನನವಂಜುವುದು ಬೇಗೆಗಯ್ಯ.
ಪಂಚಮಹಾಪಾತಕವಂಜುವುದು
ನಮ್ಮ ಕೂಡಲಸಂಗನ ನಾಮಕ್ಕಯ್ಯ.
19.
ನೀರಿಂಗೆ ನೈದಿಲೇ ಶೃಂಗಾರ,
ಊರಿಂಗೆ ಆರವೆಯೇ ಶೃಂಗಾರ,
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.
20.
ನೀನೊಲಿದರೆ ಕೊರಡು ಕೊನರುವುದಯ್ಯ.
ನೀನೊಲಿದರೆ ಬರಡು ಹಯನಹುದಯ್ಯ.
ನೀನೊಲಿದರೆ ವಿಷವಮೃತವಹುದಯ್ಯ.
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವ.
ಈ ಎಲ್ಲಾ ಬಸವಣ್ಣನವರ ವಚನಗಳನ್ನು ಓದಿ ನೀವು ಆನಂದಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ.
ಇದು ನೋಡಿ:
- 20 Akka Mahadevi Vachanagalu In Kannada – ಅಕ್ಕಮಹಾದೇವಿಯವರ ವಚನಗಳು
- 20 Buddha Quotes In Kannada – ಗೌತಮ್ ಬುದ್ಧನ ಉಲ್ಲೇಖಗಳು
- 20 Friendship Quotes In Kannada – ಸ್ನೇಹದ ನುಡಿಮುತ್ತುಗಳು